Tuesday, August 14, 2012

ನಾವೂ ಜಿಹಾದ್ ಮಾಡುತ್ತಿದ್ದೇವೆಯೇ?


ನಾವೂ ಜಿಹಾದ್ ಮಾಡುತ್ತಿದ್ದೇವೆಯೇ? 

        ನೀವು ಮತ್ತು ನಿಮ್ಮ ಸ್ನೇಹಿತರಿಬ್ಬರು ಹೀಗೇ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಾ ಇದ್ದಿರಿ ಅಂತಿಟ್ಟುಕೊಳ್ಳೋಣ. ರಸ್ತೆ ನಿಧಾನವಾಗಿ ನಿರ್ಜನವಾಗುತ್ತದೆ, ಅದೇ ಹೊತ್ತಿಗೆ ನಾನು ಜೊತೆಯಲ್ಲೊಂದು ಗುಂಪು ಕಟ್ಟಿಕೊಂಡು ಪ್ರತ್ಯಕ್ಷವಾಗುತ್ತೇನೆ. “ನೀವು ಮೂವರು ಬೇರೆ ಬೇರೆ ಸಮಾಜಕ್ಕೆ ಸೇರಿದವರು, ಹೀಗೆ ಒಟ್ಟಿಗೆ ಓಡಾಡುವಂತಿಲ್ಲ, ಯಾರನ್ನು ಕೇಳಿ ಜೊತೆಯಲ್ಲಿ ಬಂದಿರಿ?” ಎಂದು ದಬಾಯಿಸಿದ್ದಲ್ಲದೆ, ನಿಮಗೆ ಚನ್ನಾಗಿ ಒದೆಯೂ ಬೀಳುತ್ತದೆ.  ನನ್ನ ಗುಂಪು ದೊಡ್ಡದಾದ್ದರಿಂದ ಅಸಹಾಯಕರಾದ ನೀವು   “ಇಲ್ಲ ಸಾರ್, ತಪ್ಪಾಯಿತು, ಇನ್ನು ಮುಂದೆ ಹೀಗೆ ಮಾಡಲ್ಲ   ಎನ್ನುತ್ತಲೇ ಒದೆ ತಿನ್ನುತ್ತೀರಿ! ಮನೆಗೆ ಹೋಗಿ ಸ್ವಲ್ಪ ಸುಧಾರಿಸಿಕೊಂಡಮೇಲೆ ಕೇಳುತ್ತೀರಿ, “ನಾವು ಯಾರ ಜೊತೆ ಓಡಾಡಬೇಕೆನ್ನುವದನ್ನು ನಿರ್ಧರಿಸಲು ಇವರ್ಯಾವ ದೊಣ್ಣೆ ನಾಯಕರು?”..    ನಿಜವೇ, ನೀವು ಮಾಡಿದ್ದು ತಪ್ಪೋ ಸರಿಯೋ ನಂತರದ ವಿಚಾರ. ನಿಮ್ಮ ಮೇಲೆ ಕೈ ಮಾಡಲು ನಾನ್ಯಾವ ದೊಣ್ಣೆ ನಾಯಕ?
 
  ನಾನು ಮೊನ್ನೆ ಮೊನ್ನೆ ಮಂಗಳೂರಿನಲ್ಲಾದ ಘಟನೆಯ ಬಗ್ಗೆ ಖಂಡಿತ ಮಾತನಾಡುತ್ತಿಲ್ಲ. ಅಥವಾ ಬಹುಶಃ ಅದರ ಒಂದು ಭಾಗದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಆದರೆ ಆ ಘಟನೆಯ ವಿಚಾರವಾಗಿ ಯಾರ ಪರವನ್ನೂ ವಹಿಸಿಕೊಂಡು ಮಾತನಾಡುತ್ತಿಲ್ಲ. ಸುಮ್ಮನೇ, ನನಗೆ ಕಾಣುತ್ತಿರುವ ಸತ್ಯದ ಮುಖದ ಕುರಿತಾಗಿ ಬರೆಯುತ್ತಿದ್ದೇನೆ.

  “ ಮುಸ್ಲಿಂ ಯುವಕನ ಜೊತೆಗೆ ಹಿಂದೂ ಯುವತಿಯ ವಿವಾಹ!”  ಇಷ್ಟಂದರೆ ಸಾಕು, ನಮ್ಮಗಳ ರಕ್ತ ಕುದ್ದು ಹೋಗುತ್ತದೆ.  “ರೈಲಿನಲ್ಲಿ ಹಿಂದೂ ಹುಡುಗಿಯ ಜೊತೆಗೆ ಜೊತೆಗೆ ಕೆಲವು ಮುಸ್ಲಿಂ  ಹುಡುಗರ ಅಸಭ್ಯ ವರ್ತನೆ, ಕೊನೆಗೆ ಯುವತಿಯನ್ನು ರೈಲಿನಿಂದ ಹೊರಗೆ ನೂಕಿದ ಮುಸ್ಲಿಮರು!”; “ ಕಳ್ಳತನ ಮಾಡಿ ಸಿಕ್ಕಿಬಿದ್ದ ಮುಸ್ಲಿಂ ಯುವಕ ಕರೀಂ ಹಾಗೂ ಪರಮೇಶಿ!”  ಮಿತ್ರರೇ, ನನಗೊಂದು ವಿಚಾರ ಅರ್ಥವಾಗೋದಿಲ್ಲ ಇವೆಲ್ಲ ಸುದ್ದಿಗಳಲ್ಲಿ, ಮೊದಲನೇ ಸುದ್ದಿಯೊಂದನ್ನು ಬಿಟ್ಟು ಉಳಿದ ಸುದ್ದಿಗಳಲ್ಲಿ ಅವರು ಮಾಡಿದ ಕೃತ್ಯಕ್ಕೂ, ಅವರ ಧರ್ಮಕ್ಕೂ ಇರುವ ಸಂಭಂದವಾದರೂ ಏನು?  ಇಂತಹ ಅಪರಾಧಗಳನ್ನು ಪರಧರ್ಮೀಯರು ಮಾತ್ರ ಮಾಡುತ್ತರೆಯೇ? ನನಗಂತೂ ಇಲ್ಲವೆಂದೆನಿಸುತ್ತದೆ. ಆದರೆ ನಾವು ಈ ಸುದ್ದಿಗಳನ್ನು ಹೇಗೆ ಸ್ವೀಕರಿಸುತ್ತಿದ್ದೇವೆ?  ಮತೀಯ ಕನ್ನಡಕಗಳನ್ನು ಹಾಕಿಕೊಂಡಲ್ಲವೇ? ಅಂದಹಾಗೆ ಮೊದಲನೆಯ ಸುದ್ದಿ ನಟ ಶಾರೂಖ್ ಖಾನ್ ಮದುವೆಯ ಸುದ್ದಿ. “ನಟನೊಬ್ಬನ ಮದುವೆ” ಎಂದು  ಓದಿಕೊಳ್ಳಬಹುದಾದ ಸುದ್ದಿಯನ್ನು ನಾವು ಓದಿಕೊಳ್ಳುತ್ತಿರುವದು ಹೇಗೆ?

  ಫೇಸ್ಬುಕ್ಕಿನಲ್ಲಿ ದಿಂಬಿನಿಂದ ಮುಖ ಮುಚ್ಚಿಕೊಂಡ ಮೂರ್ನಾಲ್ಕು ಹುಡುಗಿರ ಚಿತ್ರವೊಂದು, ಶರ್ಟ್ ಹಾಕಿರದ ಹುಡುಗನ ಚಿತ್ರವೊಂದು ತುಂಬಾ ಓಡಾಡುತ್ತಿರುವದನ್ನು ನೋಡಿದೆ. ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುವದೆಂದರೆ ಇದೇನಾ? ಎಂಬ ಟ್ಯಾಗ್ಲೈನ್ ಬೇರೆ ಅದಕ್ಕೆ. ಸ್ವಾಮಿ, ನಮ್ಮ ಅಕ್ಕತಂಗಿಯರಿಗೇ ಯಾರಾದರೂ ದನಕ್ಕೆ ಬಡಿದ ಹಾಗೆ ಬಡಿದು, ಸಾವಿರ ಆರೋಪಗಳನ್ನು ಮಾಡಿ ಕ್ಯಾಮೆರಾದ ಎದುರಿಗೆ ಕೂರಿಸಿದ್ದಿದ್ದರೆ ಅವರು ಮುಖ ತೋರಿಸುತ್ತಿದ್ದರೆ? ಮುಖ ಕಾಣದ ಈ ಚಿತ್ರವೇ ಇಷ್ಟು ಪ್ರಚಾರ ಪಡೆದಿರಬೇಕಾದರೆ ಚಿತ್ರದಲ್ಲಿ ಮುಖ ತೋರಿಸಿದ್ದರೆ ಪರಿಸ್ಥಿತಿ ಏನಾಗುತ್ತಿದ್ದಿರಬಹುದು? ಇನ್ನು ಹಾಸಿಗೆಯಲ್ಲಿ ಮಲಗಿರುವವರು ಕ್ಡ್ಡಾಯವಾಗಿ ಶ್ರ್ಟ್ ಹಾಕಿಕೊಂಡು ಮಲಗಬೇಕಿತ್ತೆನ್ನುವದು ನನಗಂತೂ ಗೊತ್ತಿರಲಿಲ್ಲ ಬಿಡಿ. ಆದರೆ ಘಟನೆಯ ಸತ್ಯತಾ ಸತ್ಯತೆ ಏನೇ ಇರಲಿ, ಎರಡೂ ಕಡೇಯವರದೂ ಘಟನೆಯ ಬಗ್ಗೆ  ಅವರದ್ದೇಆದ ಅವೃತ್ತಿಗಳಿರುತ್ತವೆ.   ಮಂಗಳೂರಿನ ಈ ಘಟನೆಯಲ್ಲಾಗಲಿ, ಮುಸ್ಲಿಂ ಹುಡುಗಿಯರ ಜೊತೆಗಿದ್ದ ಹಿಂದೂಗಳಿಗೆ ಹೊಡೆದ ಪೋಕರಿಗಳಿಗಾಗಲಿ, ಧರ್ಮ ರಕ್ಷಣೆಯ ಕೆಲಸವನ್ನು ಗುತ್ತಿಗೆ ಕೊಟ್ಟವರ್ಯಾರು?
 
   ನಮ್ಮ ಸಂವಿಧಾನದಲ್ಲಿ  ಯಾರು ಯಾವ ಜಾತಿಯವರನ್ನು ಬೇಕಾದರೂ ಮದುವೆಯಾಗಲೂ ಅವಕಾಶವಿದೆ. ಒಂದು ಹುಡುಗ ಹಾಗೂ ಒಂದು ಹುಡುಗಿ ಬೇರೆ ಬೇರೆ ಜಾತಿಯವರಾದರೆ ಕೈ ಕೈ ಹಿಡಿದು ಓಡಾಡಬಾರದೆಂದು ನಮ್ಮ ಕಾನೂನು ಯಾವತ್ತೂ ಹೇಳಿಲ್ಲ. ಅವರು ಏನಾದರೂ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದರೂ ಸಹ, ಅವರಿಗೆ ತಾವೇ ಶಿಕ್ಷೆ ಕೊಡುವ ಅಧಿಕಾರ ಇವರಿಗೆ ಕೊಟ್ಟವರ್ಯಾರು? ನಮಗೆ ನಮ್ಮದೇ ಆದ  ನ್ಯಾಯಾಂಗವಿದೆ. ಕಾನೂನು ಬಾಹಿರ ಕೆಲಸಗಳನ್ನು ತಡೆಗಟ್ಟಲು ಅದಕ್ಕೆಂದೇ ಪ್ರತ್ಯೇಕ ವ್ಯವಸ್ಥೆ ಇದೆ. ಕಂಡವರ ಮನೆ ಮಕ್ಕಳ ಮೇಲೆ ಕೈ ಎತ್ತುವವರನ್ನು ಸಂಸ್ಕೃತಿಯ ರಕ್ಷಕರೆಂದು ಹೇಗೆ ಒಪ್ಪುವದು? ತಾಲೀಬಾನ್ ಎಂಬ ಧಾರ್ಮಿಕ ಪೋಲೀಸರ ತಂಡ ಅಫ್ಘಾನಿಸ್ತಾನದಲ್ಲಿ ಅಷ್ಟೊಂದು ಶಕ್ತಿಯುತವಾಗಿ ಬೆಳೆದಿದ್ದು ಹೇಗೆ? ಹಿಂದೂಗಳಲ್ಲಾಗಲಿ, ಮುಸ್ಲಿಮರಲ್ಲಾಗಲಿ ಇಷ್ಟೊಂದು ಧರ್ಮ ರಕ್ಷಕರು ಹುಟ್ಟುತ್ತಿರುವದು ಎಲ್ಲಿಂದ? ಅಂದು ತಾಲೀಬಾನಿಗಳು ಮಾಡಿದ್ದಕ್ಕೂ, ಇಂದು ನಮ್ಮ ಕಾಲ ಬುಡದಲ್ಲಿ ನೆಡೆಯುತ್ತಿರುವದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಇವೆಲ್ಲವೂ ಬೆಳೆಯುವದಕ್ಕೂ ಕಾರಣವಾಗುತ್ತಿರುವದು ನಮ್ಮ ಪ್ರೋತ್ಸಾಹವೇ ಎಂದರೆ ತಪ್ಪಾಗಲಾರದು. ಈ ತರಹದ ಚಟುವಟಿಕೆಗಳಿಗೆ ಸಾಮಜಿಕ ತಾಣಗಳಲ್ಲಿನ ವ್ಯಾಪಕ ಪ್ರೋತ್ಸಾಹ ಯುವ ಮನಸ್ಸುಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತಿದೆ? ನಾವು ಅವರಿಗೆ ಸತ್ಯದ ಇತರ ಮುಖಗಳನ್ನು ನೋಡಲು ಅವಕಾಶ ನೀಡುತ್ತಿದ್ದೇವೆಯೇ?  ಸಾಮಾಜಿಕ ತಾಣಗಳ ಗುಂಪುಗಳಲ್ಲಿ; ಯುವಜನರ ಮೇಲೆ ಗಾಢವಾದಂತಹ ಪರಿಣಾಮ ಬೀರುವಂತಹ ಗುಂಪುಗಳಲ್ಲಿ; ಯಾವುದು ಸರಿ ಯಾವುದು ತಪ್ಪೆನ್ನುವ ಕಲ್ಪನೆ ನೀಡುವಂತಹ ಗುಂಪುಗಳಲ್ಲಿ; ಜನಾಂಗೀಯ ದ್ವೇಷದ ಚಿಂತನೆಗಳು ಬೇಡ ಎಂಬ  ನನ್ನ ಕೂಗನ್ನು ಯಾರೂ ಯಾವತ್ತೂ ಗಮನಿಸಲಿಲ್ಲ. ಇರಲಿ...

  ಈ ದಿನ ನಮ್ಮ ಭವಿಷ್ಯ ಅಯೋಮಯವಾಗಿದೆ. ನಮ್ಮ ನಾಳಿನ ಬದುಕು ಹೇಗಿರಬಹುದೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿಯಿದೆ. ಇಷ್ಟು ವರ್ಷಗಳಿಂದ ಎಗ್ಗಿಲ್ಲದೇ ಪ್ಲಾಸ್ಟಿಕ್ ಬಳಸಿದ್ದೇವೆ, ಅದು ನಮ್ಮ ಮಣ್ಣನ್ನು ಸೇರಿ ಮಣ್ಣು ವಿಷವಾಗಿದೆ. ಈಗ್ಗೆ ಕೆಲವು ವರ್ಷಗಳಿಂದ ಅತಿಯಾದ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಸ್ವಲ್ಪ ಸ್ವಲ್ಪ ಜಾಗೃತಿ ಮೂಡಲು ಪ್ರಾರಂಭವಾಗಿದ್ದರೂ ಸಹ ಆ ನಿಟ್ಟಿನಲ್ಲಿ ನಮ್ಮ ಪ್ರಗತಿ ತೃಪ್ತಿಕರವೇ? ಈಗಾಗಲೆ ಆಗಿರುವ ಅನಾಹುತಗಳನ್ನು ಸರಿ ಮಾಡುವದು ಹೇಗೆ ಎಂಬ ಯೋಚನೆ ಮಾಡುವ ಪ್ರಯತ್ನವನ್ನಾದರೂ ಮಾಡುತ್ತಿದ್ದೇವೇ? ನಾವು ಇಷ್ಟು ದಿನ ಎಗ್ಗಿಲ್ಲದೇ ಉಪಯೋಗಿಸಿದ ಪೆಟ್ರೋಲಿಯಮ್ ಇಂಧನ ಖಾಲಿ ಆಗುತ್ತಿದೆ. ಮುಂದೇನು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಇದುವರೆಗಂತೂ ಸಿಕ್ಕಿಲ್ಲ. ಹೋಗಲಿ;  ಪೆಟ್ರೋಲಿನ ಅತಿಬಳಕೆಯಿಂದ ಆಗಿರುವ ಅನಾಹುತಗಳನ್ನು ಸರಿ ಮಾಡುವದು ಹೇಗೆ? ಯೋಚಿಸುತ್ತಿದ್ದೆವೆಯೇ? ಇದ್ದ ಅಲ್ಪ ಸ್ವಲ್ಪ ಕಾಡುಗಳೂ ನೆಲಸಮವಾಗುತ್ತಿದೆ. ಮಾತುಗಳಿಗಿಂತ ಹೆಚ್ಚಿನದಾಗಿ ಆ ನಿಟ್ಟಿನಲ್ಲಿ ಏನು ಮಾಡುತ್ತಿದ್ದೇವೆ? ಕುಡಿಯುವ ನೀರು ವಿಷವಾಗುತ್ತಿದೆ;ಮಲೆನಾಡು ಬಯಲಾಗುತ್ತಿದೆ. ಏನು ಮಾಡಬಹುದು ಎಂಬ ಯೋಚನೆಯಾದರೂ ಇದೆಯೇ? ಊರಿನಲ್ಲಿ  ಕೃಷಿಗೆ ಆಳುಗಳ ತೊಂದರೆಯಂತೆ; ಬದಲಾದ ಕಾಲಮಾನದಲ್ಲಿ ಆಳುಗಳು ಬೇರೆ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. ನಾವು ಪರ್ಯಾಯ ವ್ಯವಸ್ಥೆಗಳನ್ನು ಹುಡುಕುತ್ತಿದ್ದೆವೆಯೇ? ದಿನಬೆಳಗಾದರೆ ಪರಧರ್ಮದವರನ್ನು; ಪರಜಾತಿಯವರನ್ನು ದೂಷಿಸಿಕೊಂಡರೆ  ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಸಿಗಬಹುದೇ? ಇದರ ಬದಲು ಉತ್ತಮ ಸಂವಹನ ಮಾಧ್ಯಮವಾದ ಫೇಸ್ಬುಕ್ಕನ್ನು ವಾಸ್ತವ ಸಮಸ್ಯೆಗಳ ಚರ್ಚೆಗೆ ಬಳಸಿಕೊಳ್ಳುವದು ಉತ್ತಮವಲ್ಲವೇ? ಇಷ್ಟಕ್ಕು ಇತರರನ್ನು ದೂಷಿಸುವದರಿಂದ ನಮಗೆ ಸಿಗುವದಾದರೂ ಏನು

    ಕೊನೆಯದಾಗಿ  ನಮ್ಮ ಧರ್ಮ ರಕ್ಷಕರ ಹೊಚ್ಚ ಹೊಸ  ಉದಾಹರಣೆಯೊಂದನ್ನ ಕೊಟ್ಟುಬಿಡುತ್ತೇನೆ. ಈ ಘಟನೆಯೇ ಪ್ರಸ್ತುತ ಲೇಖನಕ್ಕೆ ಕಾರಣವಾಯಿತೆಂದರೂ ತಪ್ಪಾಗಲಾರದು. ನನ್ನ ಮಿತ್ರನೊಬ್ಬನೂ ಸಹ ಈ ಧಾರ್ಮಿಕ ಪೋಲೀಸುತನದ ಪ್ರೋತ್ಸಾಹಕನಾಗಿದ್ದ. ಈಗೊಂದು  8-10 ದಿನದ ಹಿಂದಿನಿಂದ ಅವನ ತಂಗಿಯ ಮೊಬೈಲಿಗೆ  ಅಸಭ್ಯವಾದ ಮೆಸೇಜುಗಳು ಬರಲಾರಂಭಿಸಿದವು. “ನೀನು ಯಾವುದೋ ಬೇರೆ ಜಾತಿಯವನನ್ನು ಪ್ರೀತಿಸುತ್ತಿದ್ದೀಯ; ನಿನಗೆ ನಮ್ಮ ಜಾತಿಯಲ್ಲಿ ಯಾರೂ ಸಿಗಲೇ ಇಲ್ಲವೇ? ನಮ್ಮ ಹತ್ತಿರ ನೀನು ಮಾಡಿದ ಎಲ್ಲಾ ಘನಂಧಾರಿ ಕೆಲಸಗಳಿಗೂ ಪುರಾವೆ ಇದೆ. ನೀವು ಇದೇ ರೀತಿ ಮುಂದುವರೆದರೆ ನಿಮ್ಮಿಬ್ಬರಿಗೂ ತಕ್ಕ ಶಾಸ್ತಿ ಮಾಡಿಸುತ್ತೇವೆ.” ಇದು ಆ ಮೆಸೇಜುಗಳ ಸಾರಂಶ.  ನಾನೂ ಸ್ವತಃ ಆ ಮೆಸೇಜುಗಳನ್ನು  ಓದಿದ್ದೇನೆ; ಅತ್ಯಂತ ಅಸಭ್ಯ ಭಾಷೆಯಲ್ಲಿದೆ.  ವಾಸ್ತವದಲ್ಲಿ ಅವಳು ಪ್ರೀತಿಸಿದ್ದು ಅವಳ ಜಾತಿಯ ಹುಡುಗನನ್ನೇ ಆಗಿದೆ. ಅದಕ್ಕೂ ಹೆಚ್ಚಿನದಾಗಿ ಅವರ ಪ್ರೇಮಕ್ಕೆ ಇಬ್ಬರ ಮನೆಯ ಹಿರಿಯರ ಒಪ್ಪಿಗೆಯೂ ಇದೆ. ಇಂದಲ್ಲ ನಾಳೆ ಅವರ ಮದುವೆಯೂ ಆಗಲಿದೆ. ಬಂದ ಬೆದರಿಕೆಗಳಿಗೆ ಹೆದರಿದ ಅವಳು ವಿಷಯವನ್ನು ಮನೆಯಲ್ಲಿ ಹೇಳಿದ್ದಾಳೆ.  ನನ್ನ ಸ್ನೇಹಿತ  ಮೆಸೇಜು ಬರುತ್ತಿದ್ದ ನಂಬರಿಗೆ ಪದೇ ಪದೇ ಫೋನಾಯಿಸಿ ವಿಷಯ ಕೆದಕಿದ್ದಾನೆ. ಆಗ ಆ ಕಡೆಯಲ್ಲಿ ಮಾತಾಡುತ್ತಿದ್ದವನು “ ನಾವು ಹವ್ಯಕ ರಕ್ಷಣಾ ವೇದಿಕೆಯವರು; ಆ ಹುಡುಗಿ ಬೇರೆ ಜಾತಿಯವನ ಜೊತೆ ಓಡಾಡುತ್ತಿದ್ದಾಳೆಂದು ನಮಗೆ ಮಾಹಿತಿ ಇದೆ; ಅದಕ್ಕಾಗಿ ಅವಳನ್ನು ಸರಿ ದಾರಿಗೆ ತರಲು ಹೀಗೆ ಮಾಡುತ್ತಿದ್ದೇವೆ ಅಂದನಂತೆ. ಅದಕ್ಕೆ ನನ್ನ ಸ್ನೇಹಿತ; “ ಅವಳ ಪ್ರತಿಯೊಂದೂ ಚಟುವಟಿಕೆಯ ಬಗ್ಗೆಯೂ ನನಗೆ ಅರಿವಿದೆ. ಅಣ್ಣನಾಗಿ ಅವಳು ಸರಿ ದಾರಿಯಲ್ಲಿ ಇರುವಂತೆ ನೋಡಿಕೊಳ್ಳಲು ನಾನಿದ್ದೇನೆ. ಅವಳು ಪ್ರೀತಿಸುತ್ತಿರುವವನೂ ಹವ್ಯಕನೇ ಆಗಿದ್ದಾನೆ. ವಿಷಯವೆಲ್ಲವೂ ನಮಗೆ ಗೊತ್ತೂ ಇದೆ. ನಿಮ್ಮ ಮಧ್ಯಸ್ಥಿಕೆಯೇನೂ ಬೇಕಾಗಿಲ್ಲ” ಅಂದನಂತೆ.  ಆದಕ್ಕೆ ಆ ಪುಣ್ಯಾತ್ಮ “ ನಿಮ್ಮ ಮಾತಿನ ಮೇಲೆ ನನಗೆ ನಂಬಿಕೆ ಇಲ್ಲ. ನಮಗೆ ಬಂದಿರುವ ಇನ್ಫರ್ಮೇಶನ್ ಬೇರೆಯೇ ಇದೆ. ನಾವು ನಮ್ಮ ಕೆಲಸವನ್ನು ಮಾಡಿಯೇ ತೀರುತ್ತೇವೆ” ಎಂದು ಮಾತುಕತೆಯನ್ನು ಮುಗಿಸಿದನಂತೆ. ಸಾಧು ಸ್ವಭಾವದವರಾದ ನನ್ನ ಗೆಳೆಯನ ಮನೆಯವರು ಸುಮ್ಮನಾಗಿದ್ದಾರೆ. ಅವನ ತಂಗಿಯ ಮೊಬೈಲ್ ನಂಬರ್ ಬದಲಾಗಿದೆ.

  ಹಿಂದೂಗಳಲ್ಲಾಗಲಿ, ಮುಸ್ಲಿಮರಲ್ಲಾಗಲಿ, ಕ್ರಿಶ್ಚಿಯನ್ನರಲ್ಲಾಗಲಿ... ಕೆಲವರು ಮಾತು ಅರ್ಥವಾಗುವ ವ್ಯಾಪ್ತಿಯನ್ನು ದಾಟಿ ದೂರ ಹೋಗಿಬಿಟ್ಟಿದ್ದಾರೆ. ಅರ್ಥವಿಲ್ಲದ-ಕೊನೆಯಿಲ್ಲದ ಹುಚ್ಚು ಜಿದ್ದಿಗೆ ಬಿದ್ದಿದ್ದಾರೆ. ಅವರಿಗೋಸ್ಕರ ಇಡಿಯ ಧರ್ಮಗಳನ್ನು ದೂಷಿಸಿಕೊಲ್ಲುವದರಲ್ಲಿ ಯಾವ ಅರ್ಥವೂ ಇಲ್ಲ. ನಮ್ಮ ಬುದ್ದಿ ಮಾತು ಅರ್ಥವಾಗುವಷ್ಟು ಸ್ಥಿಮಿತದಲ್ಲಿದೆಯಲ್ಲವೇ?